ಆಕಾಶ ಮತ್ತು ದಿಕ್

ಭಾರತೀಯ ತತ್ವಶಾಸ್ತ್ರದ ರೀತ್ಯ ಆಕಾಶ ಎಂದರೆ ದೇಶ. ದೇಶವೆಂದರೆ ಯಾವುದೋ ಒಂದು ಭೂಪ್ರದೇಶವನ್ನು ನಿರ್ದೇಶಿಸುವ ಪದವೆಂದು ನಾವು ತಿಳಿದಿರುತ್ತೇವೆ. ಇಲ್ಲಿ ದೇಶ ಪದ ಹಾಗೆ ಒಂದು ನಿರ್ದಿಷ್ಟವಾದ ಯಾವುದೊಂದು ಭಾಗಕ್ಕೂ ಅನ್ವಯವಾಗುವ ಪದವಲ್ಲ. ಅದು ಎಲ್ಲೆ ಇಲ್ಲದ ವಿಸ್ತಾರ. ಅದು ಅನಂತ ಭೌತವಿಶ್ವಕ್ಕೆ ತಳಹದಿಯಾದದ್ದು. ಈ ಅನಂತ ವಿಸ್ತಾರವೇ ಬ್ರಹ್ಮ ಎಂಬ ಕಲ್ಪನೆ ವೇದಗಳ ಕಾಲದಲ್ಲಿತ್ತು. ಆದರೆ ಉಪನಿಷತ್ತಿನ ತತ್ತ್ವ ಬೆಳೆದಾಗ ದೇಶವೂ ಬ್ರಹ್ಮವೂ ಒಂದೇ ಎಂಬ ಭಾವನೆ ತೇಲಿ ಹೋಯಿತು. ಬ್ರಹ್ಮಕ್ಕೆ ದೇಶವನ್ನು ಆರೋಪಿಸಿದರೆ ಬ್ರಹ್ಮಕ್ಕೆ ವಿಶ್ವಕ್ಕಿರುವ ಉಪಾಧಿಯನ್ನು ವರ್ಗಾಯಿಸಿ ತಪ್ಪು ಭಾವನೆ ಹುಟ್ಟಲು ಅವಕಾಶವಾಗುತ್ತದೆ. ಬ್ರಹ್ಮ ದೇಶದ ಉಪಾಧಿಗೆ ಒಳಪಟ್ಟದ್ದಲ್ಲ.

ಉಪನಿಷತ್ತುಗಳ ಕಾಲದ ಅನಂತರ ಆಕಾಶದ ವಿಚಾರವಾಗಿ ಅನೇಕ ಭಾವನೆಗಳು ಹುಟ್ಟಿದುವು. ನ್ಯಾಯವೈಶೇಷಿಕ ತತ್ತ್ವದ ಪ್ರಕಾರ ಆಕಾಶದ ಏಳು ಇರವಿನ ಬಗೆಗಳಲ್ಲಿ (ಕೆಟೆಗೊರೀಸ್) ಒಂದು. ದಿಕ್ಕು ಇನ್ನೊಂದು. ಆಕಾಶವೂ ದಿಕ್ಕೂ ಒಂದೇ ಅಲ್ಲ. ದಿಕ್ಕು ಎಂದರೆ ಒಂದು ಪದಾರ್ಥದ ದೇಶಸಂಬಂಧ. ಇದು ಮೇಲೆ, ಕೆಳಗಡೆ, ದೂರ, ಹತ್ತಿರ, ಪೂರ್ವ, ಪಶ್ಚಿಮ, ಎಡ, ಬಲ ಎಂಬ ದಿಕ್ ಸೂಚಕವಾದದ್ದು. ಆಕಾಶ ಶಬ್ದಕ್ಕೆ ಆಶ್ರಯ ಎಂಬ ಅರ್ಥವಿದೆ. ಇದು ಅಲೆಗಳ ಆಶ್ರಯವಾದ ಪಾಶ್ಚಾತ್ಯರ ಈಥರ್ ಎಂಬ ಭಾವನೆಗೆ ಸದೃಶವಾದದ್ದು.

ಸಾಂಖ್ಯತತ್ತ್ವ ಆಕಾಶವನ್ನು ಐದು ಭೂತಗಳಲ್ಲಿ ಒಂದೆಂದು ಭಾವಿಸಿದೆ. ಅದ್ವೈತಿಗಳು ಆಕಾಶವನ್ನು  ಮಾಯೆಯ ಒಂದು ರೂಪವೆಂದು ಭಾವಿಸಿದ್ದಾರೆ. ಬೌದ್ಧರು ಆಕಾಶವನ್ನು ಕ್ಯಾಂಟ್‍ನಂತೆ ಮಾನಸಿಕ ಕಲ್ಪನೆಯೆಂದು ಭಾವಿಸಿದ್ದಾರೆ. ಜೈನರು ಐದು ಅಜೀವ ವಸ್ತುಗಳಲ್ಲಿ ದೇಶ ಒಂದೆಂದು ಭಾವಿಸಿದ್ದಾರೆ. ಆಕಾಶವನ್ನು ಎರಡಾಗಿ ವಿಭಾಗಿಸಿದ್ದಾರೆ. ಒಂದು ಲೋಕಾಕಾಶ, ಇನ್ನೊಂದು ಅಲೋಕಾಕಾಶ. ಲೋಕದಲ್ಲಿರುವ ಎಲ್ಲ ಬಗೆಯ ಚಲನೆಗೂ  ಅವಕಾಶವಾಗಿರುವುದು ಲೋಕಾಕಾಶ.  ಲೋಕದ ಹೊರಗಿನ ಆಕಾಶಕ್ಕೆ ಅಲೋಕಾಕಾಶವೆಂದು ಹೆಸರನ್ನು ಕೊಟ್ಟಿರುತ್ತಾರೆ. ಪೂರ್ವ ಮೀಮಾಂಸಕರು ದಿಕ್ಕಿಗೂ ಆಕಾಶಕ್ಕೂ ಇರುವ ಭೇದವನ್ನು ಒಪ್ಪಿರುತ್ತಾರೆ. ವೈಶೇಷಿಕರಂತೆ ದಿಕ್ಕು ಪ್ರತ್ಯಕ್ಷವಾದ ಶಬ್ದವೆಂದು ಗುಣಕ್ಕೆ ಆಶ್ರಯವೆಂದೂ ಇವರು ಒಪ್ಪುವುದಿಲ್ಲ. ದಿಕ್ಕಿನಂತೆ ಪ್ರತ್ಯಕ್ಷಸಿದ್ಧ. ದ್ವೈತವೇದಾಂತಿಗಳು ಆಕಾಶ ಮಾಯಾರೂಪವೆಂಬುವುದನ್ನು ಒಪ್ಪುವುದಿಲ್ಲ. ಅದು ವಾಸ್ತವ ಜ್ಞಾನ ವಿಷಯ. ಕೆಲವರು ಆಕಾಶ ಹುಟ್ಟಿತೆಂದು ಬಗೆಯುತ್ತಾರೆ. ಹುಟ್ಟುವುದು ಭೂತಾಕಾಶ ಮಾತ್ರ. ಅವ್ಯಾಕೃತ ಆಕಾಶಕ್ಕೆ ಹುಟ್ಟಿಲ್ಲ. ಆಕಾಶ ಸಾಕ್ಷಿಪ್ರಮಾಣದಿಂದ ಸಿದ್ಧವಾಗುತ್ತದೆ. ದ್ವೈತಿಗಳು ದಿಕ್ಕು ಆಕಾಶದಿಂದ ಭಿನ್ನವೆಂಬ ಪಕ್ಷವನ್ನು ನಿರಾಕರಿಸಿರುತ್ತಾರೆ. ದಿಕ್ಕು ದೇಶವೇ.                         
                                
  (ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ